Random Post

Breaking News
Loading...
Saturday, 10 October 2015

ಕ್ಯಾನ್ಸರಿಗೆ ಬಲಿಯಾದ ವೇಣು ವಾದಕ ಎನ್ ರಮಣಿ

Saturday, October 10, 2015
ಚೆನ್ನೈ, ಅ.10: ಖ್ಯಾತ ಕೊಳಲು ವಾದಕ ನಟೇಶನ್ ರಮಣಿ (82) ಅವರು ಶುಕ್ರವಾರ ನಿಧನರಾಗಿದ್ದಾರೆ. ಅಕ್ಟೋಬರ್ 15ರಂದು ಅವರ ಹುಟ್ಟುಹಬ್ಬ ಆಚರಣೆಗೆ ಸಿದ್ಧತೆ ನಡೆದಿತ್ತು, ಅದರೆ, ಅಷ್ಟರಲ್ಲಿ ಕೊರಳ ಕ್ಯಾನ್ಸರ್ ಅವರನ್ನು ಬಲಿ ತೆಗೆದುಕೊಂಡಿತು. ಕ್ಯಾನ್ಸರಿಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದ ರಮಣಿ ಅವರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ. ತಿರುಮಲ ತಿರುಪತಿ ದೇವಸ್ಥಾನದ ಆಸ್ಥಾನ ವಿದ್ಯಾನ್ ಆಗಿದ್ದ ಎನ್ ರಮಣಿ ಅವರ ಪುತ್ರ ಆರ್ ತ್ಯಾಗರಾಜನ್ ಹಾಗೂ ಮೊಮ್ಮಗ ಅತುಲ್ ಕುಮಾರ್ ಅವರು ಕೂಡಾ ಕೊಳಲುವಾದಕರಾಗಿದ್ದಾರೆ.

1934ರಲ್ಲಿ ತಿರುವರೂರ್ ನಲಿ ಜನಿಸಿದ ರಮಣಿ ಅವರು ತ್ಯಾಗರಾಜ, ಮುತ್ತುಸ್ವಾಮಿ ದೀಕ್ಷಿತರ್, ಶ್ಯಾಮಶಾಸ್ತ್ರಿಗಳ ಪರಂಪರೆಯನ್ನು ಮುಂದುವರೆಸಿದವರು. ಅಳಿಯೂರು ನಾರಾಯಣ ಸ್ವಾಮಿ ಅಯ್ಯರ್ ಅವರ ಶಿಷ್ಯರಾಗಿದ್ದ ರಮಣಿ ಅವರಿಗೆ ಅವರ ತಾಯಿ ಶಾರಾದಾಂಬಾಳ್ ಅವರಿಂದ ಶಾಸ್ತ್ರೀಯ ಸಂಗೀತ ಪಾಠ ಸಿಕ್ಕಿತು. ಬಳಿಕ ಟಿ.ಆರ್. ಮಹಾಲಿಂಗಂ ಅವರಲ್ಲಿ ಕೊಳಲು ವಾದನ ಅಭ್ಯಾಸ ಮುಂದುವರಿಸಿದ್ದರು ವಯೋಲಿನ್ ಮಾಂತ್ರಿಕ ಲಾಲ್ಗುಡಿ ಜಯರಾಮನ್ ಮತ್ತು ವೈಣಿಕ ಆರ್. ವೆಂಕಟರಮಣ್ ಅವರನ್ನು ಒಳಗೊಂಡ ವಯೋಲಿನ್-ವೇಣು-ವೀಣಾ ತಂಡದ ಪ್ರಮುಖ ಸದಸ್ಯರಾಗಿದ್ದರು. ಪಂಡಿತ್ ಹರಿಪ್ರಸಾದ್ ಚೌರಾಸಿಯಾ, ಎಂಎಸ್ ಗೋಪಾಲಕೃಷ್ಣನ್, ಎನ್ ರಾಜಂ, ಪಂಡಿತ್ ವಿಶ್ವಮೋಹನ್ ಭಟ್, ಮ್ಯಾಂಡೋಲಿನ್ ಯು ಶ್ರೀನಿವಾಸ್ ಸೇರಿದಂತೆ ಸಂಗೀತ ದಿಗ್ಗಜರೊಡನೆ ಜುಗಲ್ ಬಂದಿ ಕಾರ್ಯಕ್ರಮದಲ್ಲಿ ಎನ್ ರಮಣಿ ಪಾಲ್ಗೊಂಡಿದ್ದರು. 1971ರಲ್ಲಿ ಸಂಗೀತಾ ಚೂಡಾಮಣಿ, 1973ರಲ್ಲಿ ಕಲೈಮಾಮಣಿ ಪ್ರಶಸ್ತಿ, 1978ರಲ್ಲಿ ವೇಣುಗಾನ ಚಕ್ರವರ್ತಿ, 1984ರಲ್ಲಿ ಕೇಂದ್ರೀಯ ಸಂಗೀತ ಅಕಾಡೆಮಿ ಪ್ರಶಸ್ತಿ, 1987ರಲ್ಲಿ ಪದ್ಮಶ್ರೀ, 1997ರಲ್ಲಿ ಸಂಗೀತ ಕಲಾನಿಧಿ ಮತ್ತು 1999ರಲ್ಲಿ ಇಸೈ ಪೆರಾರಿಗ್ನಾರ್ ಪ್ರಶಸ್ತಿಗಳು ಸಂದಿವೆ.

0 comments:

Post a Comment

 
Toggle Footer